ಇರ್ಲಿಂಗಿ
 	ಹೆಣ್ಣು ಗಂಡುಗಳ ಲಿಂಗಗಳಿಗೆ ವಿಶಿಷ್ಟವಾದ ಎರಡು ತೆರನ ಲಕ್ಷಣಗಳನ್ನೂ ಹೊಂದಿರುವ ವ್ಯಕ್ತಿ (ಹರ್ಮಫ್ರೂಡೈಟ್). ಹರ್ಮಫ್ರೂಡೈಟ್ ಪದದ ಮೂಲ ಹರ್ಮಫ್ರೂಡೈಟಿಸ್. ದೇವದೂತ ಹರ್ಮಿಸನೊಡನೆ ಕಾಮದೇವತೆ ಅಪ್ರೂಡೈಟ್ ತಾನು ಚಿರವಾಗಿ ಸೇರಬೇಕೆಂದು ದೇವತೆಗಳನ್ನು ಬೇಡಿದ್ದರ ಫಲ ಹರ್ಮಫ್ರೂಡೈಟಿಸ್ ಎಂದು ಗ್ರೀಕ್ ಪುರಾಣದಲ್ಲಿದೆ. ಹೆಣ್ಣು, ಗಂಡಿನ ಅಂಗಗಳು ಎರಡು ಮೊಗಗಳೊಡನೆ ಚಂದ್ರನ ಅಂಶವಾಗಿ ಹಿಟ್ಟಿದ ಒಬ್ಬ ವ್ಯಕ್ತಿಯನ್ನು ಗ್ರೀಕ್ ಮಹಾಧಿದೇವ ಜóೂಸ್ ಎರಡಾಗಿ ಕತ್ತರಿಸಿ ಮತ್ತೆ ಒಂದುಗೂಡಿಸಲು ಮಾಡಿದ ಯತ್ನಗಳು ಕೈಗೂಡಲಿಲ್ಲವೆಂದು ಪ್ಲೇಟೊ ಹೇಳಿದ್ದಾನೆ. ಹೆಣ್ಣು ಗಂಡುಗಳು ಎದುರುಬದುರು ರೂಪಗಳು, ಎರಡು ಲಿಂಗಗಳೂ ಒಂದೇ ವೈಯಲ್ಲಿದ್ದರೆ, ಗಂಡಿನ ರಸಗಳಿಂದ ಹೆಣ್ಣಿನ ಲಿಂಗದವು ನಶಿಸುವುವು. ಹಾಗೆಯೆ ಹೆಣ್ಣಿನ ಅಂಡಾಶಯ ರಸಗಳಿಂದ ಗಂಡಿನ ಅಂಗಗಳ ಬೆಳವಣಿಗೆ ಕುಗ್ಗುವುದು. ಈ ಕಥೆಯಲ್ಲಿ, ಹೀಗೆ ಹೆಣ್ಣು ಗಂಡುಗಳು ಕೂಡಿ ಒಟ್ಟಿಗಿರುವುದು ಕಷ್ಟಸಾಧ್ಯವೆಂಬ ಅರ್ಥವಿದೆ. ಹಿಂದೂ ಪುರಾಣಗಳಲ್ಲೂ ಅರ್ಧನಾರೀಶ್ವರ, ಶಿಖಂಡಿಗಳ ವಿಚಾರಗಳಿವೆ. ಗಂಡಸಾದ ಮಾಂಧಾತ ಗರ್ಭವನ್ನು ಧರಿಸಿ ಮಗುವನ್ನು ಹೆತ್ತನಂತೆ, ಗ್ರೀಕರ, ರೋಮನ್ನರ ಕಲೆಗಳಲ್ಲಿ, ಗಂಡಿನ ಜನನಾಂಗಗಳಿರುವ ಹೆಣ್ಣಿನ ರೂಪಗಳು ಚಿತ್ರಿತವಾಗಿವೆ. ಇದು ಕಲಾವಂತರ ಕಲ್ಪನೆ ಮಾತ್ರವಲ್ಲ, ನಿಜವಾಗೂ ಈ ತೆರನ ಮಂದಿ ಒಮ್ಮೊಮ್ಮೆ ಕಾಣಬರುವರು.

	ಸಾಮಾನ್ಯವಾಗಿ, ನಿಸರ್ಗದಲ್ಲಿ ಒಂದು ಗಂಡು ಜೀವಕಣದೊಂದಿಗೆ (ರೇತುಕಣ), ಒಂದು ಹೆಣ್ಣು ಜೀವಕಣ (ಅಂಡಾಣು) ಒಂದುಗೂಡುವುದರಿಂದ ಒಬ್ಬ ವ್ಯಕ್ತಿ ಆಗುವನು. ಪೂರ್ತಿ ಬೆಳೆದ ಗಂಡಲ್ಲಾಗಲಿ, ಹೆಣ್ಣಲ್ಲಾಗಲಿ, ಇನ್ನೊಂದು ಲಿಂಗದ ಜನನಾಂಗಗಳ ಅಂಕುರಾಂಗಗಳು (ರೂಡಿಮೆಂಟ್ಸ್) ಇದ್ದೇ ಇರುತ್ತವೆ. ಎಳೆಯ ಪಿಂಡದಲ್ಲಿ ಗಂಡು ಹೆಣ್ಣುಗಳ ವ್ಯತ್ಯಾಸವನ್ನು ಕಂಡುಕೊಳ್ಳುವುದು ಬಲು ಕಷ್ಟ. ತುಸು ಕಾಲದಲ್ಲೇ ಗಂಡಿನ ಇಲ್ಲವೇ ಹೆಣ್ಣಿನ ಲಕ್ಷಣಗಳು ತೋರುತ್ತ ಬರುವವು. ಕೊನಗೆ ಜನನಾಂಗಗಳು ಅನುಮಾನ ಇರದಂತೆ ಗಂಡು ಇಲ್ಲವೇ ಹೆಣ್ಣಿನವಾಗುತ್ತವೆ.

	ಜನನಾಂಗದ ಲಿಂಗ ನಿರ್ಧಾರದೊಂದಿಗೇ ಇತರ ಅಂಗಾಂಗಗಳೂ ಅದೇ ಲಿಂಗದವಕ್ಕೆ ತಕ್ಕ ಹಾಗೆ ಬೆಳೆಯುತ್ತವೆ. ಹೀಗೆ ತರಡು (ಟೆಸ್ಟಿಸ್, ವೃಷಣ) ಬೆಳೆದ ಕೂಸಿನಲ್ಲಿ ಬುಲ್ಲ (ಪೀನಿಸ್, ಶಿಶ್ನ), ಮುನ್ನಿಲುಗ (ಪ್ರಾಸ್ಪೇಟ್) ಇತ್ಯಾದಿಗಳೂ ಅಂಡಾಶಯ (ಓವರಿ) ಬೆಳೆದ ಕೂಸಿನಲ್ಲಿ ಯೋನಿ, ಗರ್ಭಕೋಶ ಗರ್ಭನಾಳ ಮುಂತಾದವೂ ಬೆಳೆವುವು. ಆದರೆ ಬುಲ್ಲದ ಅಂಕರಾಂಗ ಹೆಂಗಸಿನಲ್ಲಿ ಹೆಂಬುಲ್ಲವಾಗೂ (ಕ್ಲೈಟೊರಿಸ್) ಗರ್ಭಕೋಶದ ಅಂಕುರಾಗ ಗಂಡಸಿನಲ್ಲಿ ಗಂಡುಗರ್ಭ ಕೋಶವಾಗೂ (ಯೂಟೆರಸ್ ಮ್ಯಾಸ್ಕುಲೈನಸ್) ಉಳಿದಿರುತ್ತವೆ. ಹರೆಯಕ್ಕೆ ಬಂದವರಲ್ಲಿ ಈ ಅಂಗರಚನೆಗಳಲ್ಲಿನ ಬದಲಾವಣೆಯೊಂದಿಗೆ ಎಂದಿನಂತೆ ಅದೇ ಲಿಂಗದ ಗೊತ್ತಾದ ವರ್ತನೆಗಳೂ ಹೊರಗಾಣುತ್ತವೆ. ಅಂದರೆ ಸಾಮಾನ್ಯವಾಗಿ ಗಂಡಿನ ಒಲವು ಹೆಣ್ಣಿನ ಕಡೆಗೂ ಹೆಣ್ಣಿನ ಒಲವು ಗಂಡಿನ ಕಡೆಗೂ ವಾಲುತ್ತವೆ.

	ಕೆಲವೇಳೆ ಹೀಗೆ ಸಹಜವಾಗಿ ಬೆಳೆಯುವುದಕ್ಕೆ ಅಡ್ಡಿಯಾಗಿ ಗಂಡು ಹೆಣ್ಣಿನ ಅಂಗಗಳು ಎರಡೂ ಒಂದೇ ವ್ಯಕ್ತಿಯಲ್ಲಿ ಇರಬಹುದು; ಒಂದು ವ್ಯಕ್ತಿಯಲ್ಲಿ ತರಡು ಅಂಡಾಶಯ ಈ ಎರಡು ಜನನಾಂಗ ಗ್ರಂಥಿಗಳೂ ಇರಬಹುದು; ಇಲ್ಲವೇ ಅಂಡಾಶಯತರಡು (ಓವೂಟೆಸ್ಟಿಸ್) ಗ್ರಂಥಿ ಮಾತ್ರ ಇರಬಹುದು. ಇವನಲ್ಲಿ ಇತರ ಜನನಾಂಗಗಳು ಬೇರೆಬೇರೆ ಆಗಿರಬಹುದು. ಒಳಗಿನ ಜನನಾಂಗಕ್ಕೂ ಹೊರಗಾಣುವವಕ್ಕೂ ಹೊಂದಾಣಿಕೆ ಕಾಣದಾಗುತ್ತದೆ; ಹೊರಗೆ ಬುಲ್ಲ ಇದ್ದರೂ ಒಳಗೆ ಗರ್ಭಕೋಶ ಇರಬಹುದು; ಹೊರಗಡೆ ಯೋನಿ ಕಾಣುತ್ತಿದ್ದರೂ ಒಳಗೆ ಗಂಡಿನ ಜನನಗ್ರಂಥಿ ಇರಬಹುದು. ಇವರು ತೋರ್ಕೆಯ ಇರ್ಲಿಂಗಗಳು. ಅಂದರೆ, ಇವರು ನಿಜವಾದ ಇರ್ಲಿಂಗಗಳಲ್ಲ ಎರಡು ಲಿಂಗಗಳ ಪ್ರಭಾವಗಳೂ ಒಮ್ಮೆಗೇ ತೋರವು. ಸಂತಾನಬಲವಿಲ್ಲದ ಇವರು ನಪುಂಸಕರು. ಇವರಲ್ಲಿರುವ ಹೆಣ್ಣುಗಂಡಿನ ಜನನಾಂಗಗಳಲ್ಲಿ ಹಲವು ಸರಿಯಾಗಿರವು. ಹೆಣ್ಣಂತಿರುವ ಗಂಡೂ ಗಂಡಂತಿರುವ ಹೆಣ್ಣೂ ಇರಬಹುದು. ಆದರೂ ಇವರು ಹೆಣ್ಣು ಅಲ್ಲ, ಗಂಡೂ ಅಲ್ಲ. ಹರೆಯಕ್ಕೆ ಬರುವ ತನಕ ನಿಜವಾದ ಲಿಂಗದ ಲಕ್ಷಣಗಳು ಸರಿಯಾಗಿ ಹೊರದೋರವು. ಹರೆಯಕ್ಕೆ ಬರುವ ಹೊತ್ತಿನಲ್ಲಿ ಹೀಗಾದಾಗಲೇ ಇದ್ದಕ್ಕಿದ್ದ ಹಾಗೆ ಹುಡುಗಿ ಹುಡುಗನಾಗಿ ಕಂಡುದು ಪತ್ರಿಕೆಗಳಲ್ಲಿ ಸೋಜಿಗದ ಸುದ್ದಿ ಆಗುವುದು.

	ನಿಸರ್ಗದಲ್ಲಿ ಎಷ್ಟೊ ಗಿಡಗಳೂ ವಿಕಾಸದಲ್ಲಿ ಕೆಳ ಮಟ್ಟದಲ್ಲಿರುವ ಕೆಲವು ಹುಳುಗಳು, ಮೃದ್ವಂಗಿಗಳು (ಮೊಲಸ್ಕಸ್), ಚಿಪ್ಪಂಗಿಗಳು (ಕ್ರಸ್ಟೇಷಿಯನ್ಸ್) ಇತ್ಯಾದಿ ವರ್ಗಗಳ, ಪ್ರಾಣಿಗಳೂ ಹೆಣ್ಣು ಗಂಡುಗಳ ಜನಾಂಗಗಳು ಒಂದೇ ಮೈಯಲ್ಲಿರುವ ಇರ್ಲಿಂಗಗಳು. ಇರ್ಲಿಂಗಿ ತನ್ನ ಅಂಡಗಳನ್ನೂ ಇತರವನ್ನೊ ಫಲವಂತಿಸಬಹುದಾದರೂ (ಫರ್ಟಿಲೈಸ್) ಈ ಜೀವಿಗಳಲ್ಲಂತೂ ತಮ್ಮದೇ ಆದ ಅಂಡಾಣುವೂ (ಓವಂ) ರೇತುಕಣವೂ (ಸ್ಟರ್ಮೆಟೊeóÉೂನ್) ಒಂದು ಕೂಡಲಾರವು. ಕೂಡಿದರೂ ಫಲವಿಲ್ಲ. ಸಂತಾನ ಸರಿಯಾಗಿ ಬೆಳೆಯದು. ಮುಸುಕಿನ ಜೋಳದ ಕೆಲವು ತಳಿಗಳಲ್ಲಿ ಎರಡು ಲಿಂಗಗಳೂ ಇರುವುವು. ಕೆಲವಲ್ಲಿ ಒಂದೇ ಇರುತ್ತದೆ. ಎರೆಹುಳು (ಆರ್ತ್‍ವರ್ಮ್), ಬಸವನ ಹುಳುಗಳಲ್ಲಿ ಎರಡು ಲಿಂಗಗಳಲ್ಲೂ ಬೇರೆ ಬೇರೆ ಆಗಿದ್ದರೂ ತನ್ನಲ್ಲಿ ತನ್ನಿಂದಲೇ ಫಲವಂತಿಕೆ ಆಗದೆ ಎರಡು ಪ್ರಾಣಿಗಳು ಜೋಡಿಬಿದ್ದು ರೇತು; ಕಣಗಳನ್ನು ಒಂದಕ್ಕೊಂದು ಅದಲುಬದಲು ಮಾಡಿಕೊಳ್ಳುತ್ತವೆ. ಬಲುಮಟ್ಟಿಗೆ ಎಲ್ಲ ಬೆನ್ನೆಲುಬಿ ಪ್ರಾಣಿಗಳಲ್ಲೂ ಬೆನ್ನುಲುಬಿ ಸಸ್ತನಿಯಾದ ಮಾನವನಲ್ಲೂ ಗಂಡು ಹೆಣ್ಣು ಬೇರೆ ಬೇರೆ.

	ಲಿಂಗ ನಿರ್ಧಾರ : ಒಂದು ಪ್ರಾಣಿಯ ಒಂದೊಂದು ಜೀವಕಣದಲ್ಲಿರುವ ವರ್ಣತಂತುಗಳು (ಕ್ರೋಮೊಸೆûೂೀಮ್ಸ್) ಆ ಪ್ರಾಣಿಕುಲಕ್ಕೆ ತಕ್ಕಂತೆ ಗೊತ್ತಾದ ಸಂಖ್ಯೆಯಲ್ಲಿರುವುವು. ಇವುಗಳಲ್ಲಿ ಘಿ ವರ್ಣತಂತುಗಳೊಡನೆ ಸೇರುವ, ಹೆಣ್ಣಿನ ಜೀನಿಗಳನ್ನು (ಜನಿಕಗಳು) ಹೊತ್ತಿರುವ ವರ್ಣತಂತು ಘಿ ಕೂಡಿದಾಗಲೂ ಗಂಡಿನ ಜೀನಿಗಳಿರುವ ಙ ಕೂಡಿದಾಗಲೂ ಲಿಂಗ ನಿರ್ಧಾರವಾಗುವುದು (ಲಿಂಗದ ವರ್ಣತಂತುಗಳು). ಮಿಕ್ಕ ವರ್ಣತಂತು ಜೊತೆಗಳು ಮೈಗೆ ಸಂಬಂಧಪಟ್ಟ ಅಲಿಂಗ ವರ್ಣತಂತುಗಳು (ಆಟೊಸೋಮ್ಸ್). ಉದಾಹರಣೆಗಾಗಿ, ಮಾನವನಲ್ಲಿ 22 ಜೊತೆ ಅಲಿಂಗ ವರ್ಣತಂತುಗಳಿವೆ. ಹೆಣ್ಣಲ್ಲಿ ಘಿಘಿ ಮತ್ತು ಗಂಡಲ್ಲಿ ಘಿಙ ಲಿಂಗದ ವರ್ಣತಂತುಗಳಿವೆ. ಙ ವರ್ಣತಂತು ಘಿ ಗಿಂತ ಸಣ್ಣದು.

	ಅಂಡಾಶಯಗಳೂ ತರಡುಗಳೂ ಸರಿಯಾಗಿ ಬೆಳೆದು ಹರೆಯದ ಹೊತ್ತಿಗೆ ಚೆನ್ನಾಗಿ ಕೆಲಸ ಮಾಡುವುದು ಮುಖ್ಯ. ಜನನಾಂಗ ಗ್ರಂಥಿಗಳ ರಸಗಳಿಂದ ಗಂಡಿನ, ಹೆಣ್ಣಿನ ಅಂಗಲಕ್ಷಣಗಳು (ಗಡ್ಡ ಮೀಸೆಗಳು ಸ್ತನಗಳು,) ಹರೆಯದಲ್ಲಿ ಕಾಣಿಸಿಕೊಂಡು ಜನನಾಂಗ ನಾಳಗಳು (ಬುಲ್ಲ ಗರ್ಭಕೋಶ, ಇತ್ಯಾದಿ) ಸರಿಯಾಗಿ ಪೂರ್ತಿಯಾಗಿ ಬೆಳೆಯುತ್ತವೆ. ಹರೆಯಕ್ಕೆ ಬರಲು ಎಲ್ಲ ಒಳಸುರಿಕ ಗ್ರಂಥಿಗಳೂ ಒಂದಕ್ಕೊಂದು ಹೊಂದಿಕೊಂಡು ಕೆಲಸ ಮಾಡಬೇಕು.

	ವ್ಯಕ್ತಿತ್ವ, ನಡೆ, ನುಡಿ, ಉಡುಪು, ತನ್ನ ರೂಪದ ವ್ಯಾಮೋಹ, ಮನಸ್ಸು, ಭಾವನೆಗಳಲ್ಲಿ ಹರೆಯದ ಹೊತ್ತಿಗೆ ಬದಲಾವಣೆಗಳಾಗುತ್ತವೆ. ಗೂಳಿಗೂ ಎತ್ತಿಗೂ ಇರುವ ವ್ಯತ್ಯಾಸವನ್ನು ಇಲ್ಲಿ ನೆನೆಯಬಹುದು. ಹೆಣ್ಣಂತಿರುವ ಗಂಡಿಗೆ ಗಂಡಿನಲ್ಲೇ ಒಲವು ಗಂಡಂತಿರುವ ಹೆಣ್ಣಿಗೆ ಹೆಣ್ಣಿನಲ್ಲೇ ಒಲವು. ಇದೇ ಸ್ವಲಿಂಗತನ (ಹೋಮೊಸೆಕ್ಷುಯಾಲಿಟಿ).

	ಲಿಂಗನಿರ್ಧಾರವಾಗಲು, ಆಯಾ ಜಾತಿಯ ಜೀವಿಗೆ ತಕ್ಕಂತೆ ಜೀವಕಣಗಳಲ್ಲಿ ವರ್ಣತಂತುಗಳು ಸರಿಯಾದ ಸಂಖ್ಯಾ ಪ್ರಮಾಣದಲ್ಲಿ ಇರುವುದು ಬಲು ಮುಖ್ಯ. ಅದರಲ್ಲೂ ಪಿಂಡದ ಬೆಳವಣಿಗೆಯ ಮೊದಲಲ್ಲಿ ಇನ್ನೂ ಮುಖ್ಯ. ವರ್ಣತಂತುಗಳು ಮೈ ಅಂಗಗಳ ಬೆಳವಣಿಗೆಗೆ ದಾರಿ ತೋರುತ್ತವೆ. ಇವುಗಳ ಸಂಖ್ಯಾ ಪ್ರಮಾಣಗಳು ಸರಿಯಾಗಿಲ್ಲದಲ್ಲಿ (ಹಲವೇಳೆ ಆಗುವಂತೆ,) ಪಿಂಡಗಳು ಸರಿಯಾಗಿ ಬೆಳೆಯದೆ ಬರಡಾಗಿ ಇಬ್ಬಂದಿ ಲಿಂಗ ಲಕ್ಷಣಗಳನ್ನು ತೋರುತ್ತವೆ. ವರ್ಣತಂತುಗಳ ಮೂಲಕ ಲಿಂಗವನ್ನು ನಿರ್ಧರಿಸುವ ಜೀವಕಣೀಯ ಹೊಸ ವಿಧಾನಗಳು ಬಂದ ಮೇಲೆ ಅಂಗಗಳ ವಿಚಿತ್ರಗಳ ವಿಚಾರ ಹೆಚ್ಚಾಗಿ ಗೊತ್ತಾಗಿದೆ. ಹೆಣ್ಣಿನ ಜೀವಕಣದ ಬೀಜದ (ನ್ಯೂಕ್ಲಿಯಸ್) ಅಂಚಿನಲ್ಲಿ ಲಿಂಗದ ದಟ್ಟರಂಗಿ (ಕ್ರೊಮ್ಯಾಟಿನ್) ಇರುವುದೇ ವಿಶೇಷ ಲಕ್ಷಣ. ಗಿಡಗಳ ಕುಡಿಗಳಿಗೂ ಮೊಗ್ಗುಗಳಿಗೂ ಕಾಲ್ಚಿಸೀನ್ ಮದ್ದನ್ನು ತುಸು ಸವರಿದರೆ ಆಮೇಲೆ ಬೆಳೆದು ಬರುವ ಬೀಜಗಳ ಜೀವಕಣಗಳಲ್ಲಿ ವರ್ಣತಂತುಗಳ ಸಂಖ್ಯೆ ಎರಡು-ಮೂರರಷ್ಟು ಗುಣಿತವಾಗಿ, ಕೊನೆಗೆ ಆ ಬೀಜಗಳಿಂದ ಹುಟ್ಟುವ ಗಿಡಗಳಲ್ಲಿ ಮೊಳೆವ ಬೀಜಗಳೇ ಬಿಡುವುದಿಲ್ಲ. ಪ್ರಾಣಿಗಳಲ್ಲೂ ಹೀಗೆ ಏನೋ ಕಾರಣದಿಂದ ವರ್ಣತಂತುಗಳ ಸಂಖ್ಯೆಯಲ್ಲಿ ಬದಲಾವಣೆ ಆಗಿ ಇರ್ಲಿಂಗಿ ಲಕ್ಷಣಗಳಿರುವ ನಪುಂಸಕ ಪ್ರಾಣಿಗಳು ಹುಟ್ಟುತ್ತವೆ.

	ವರ್ಣತಂತುಗಳು ದುಪ್ಪಟ್ಟು ಮುಪ್ಪಟ್ಟಾದಾಗ ಕೆಲವೇಳೆ ಹೆಂಗಂಡುರೂಪತನ (ಗೈನ್ಯಾಮಡ್ರೊಮಾರ್ಫಿಸಂ). ಅಂದರೆ ಮೈಯ ಒಂದು ಪಕ್ಕ ಹೆಣ್ಣಾಗೂ ಇನ್ನೊಂದು ಗಂಡಾಗೂ ಇರುವ ಪ್ರಾಣಿಗಳು ಹುಟ್ಟುತ್ತವೆ. ಹುಳುಹುಪ್ಪಟೆಗಳಲ್ಲಿ ಈ ವಿಚಿತ್ರ ತೀರಾ ಸಾಮಾನ್ಯ. ಈ ಜೀವಿಗಳಲ್ಲಿ ಹೆಚ್ಚಿನ ಜನನಾಂಗಗಳಿರುವ ಪ್ರಾಣಿಯಲ್ಲಿ ಸಂತಾನಬಲ ಇರುವುದು. ಆದರೆ, ಗಂಡಿನವರಿವು ಪ್ರಾಣಿಯಲ್ಲಿರದು. ಸಾಧಾರಣವಾಗಿ, ಕೀಟಕಗಳಲ್ಲಿ ವರ್ಣತಂತುಗಳು ಆಯಾ ಜಾತಿಗೆ ಗೊತ್ತಾದವಕ್ಕಿಂತ ಮುಪ್ಪಟ್ಟಿದ್ದರೆ ಮೇಟಿ ಹೆಣ್ಣು (ಸೂಪರ್ ಫೀಮೇಲ್), ಮೇಟಿ ಗಂಡು (ಸೂಪರ್ ಮೇಲ್) ನಡುಲಿಂಗ (ಇಂಟರ್ ಸೆಕ್ಸ್) ಪ್ರಾಣಿಗಳಾಗುತ್ತವೆ.

	ಮಾನವ ಇರ್ಲಿಂಗಿಗಳು : ಇಲ್ಲಿ ಐದು ಮಾದರಿಗಳಿವೆ : ನಿಜ ಇರ್ಲಿಂಗಿಗಳು : ಹುಸಿ ಹೆಣ್ಣುಗಳು ಇಲ್ಲವೇ ಗಂಡುಗಳು; ಗಂಡು ಇಲ್ಲವೇ ಹೆಣ್ಣು ಹುಸಿ ಇರ್ಲಿಂಗಿಗಳು. ನಿಜ (ಟ್ರೂ) ಇರ್ಲಿಂಗಿಗಳಲ್ಲಿ ಹೆಣ್ಣಿನ ಅಂಡಾಶಯವೂ ಗಂಡಿನ ತರಡೂ ಒಂದಾಗಿರುವುವು; ಇಲ್ಲವೇ ಒಂದು ಪಕ್ಕದಲ್ಲಿ ಹೆಣ್ಣಿನ ಜನನಾಂಗವಾದ ಅಂಡಾಶಯ ಇದ್ದು, ಮತ್ತೊಂದೆಡೆ ಗಂಡಿನ ತರಡು ಇರುವುದು; ಎರಡೂ ಒಂದಾಗಿ ಕೂಡಿ ಅಂಡಾಶಯತರಡು ಆಗಿರಬಹುದು. ಇದುವರೆಗೆ ಪ್ರಪಂಚದಲ್ಲಿ ಈ ಬಗೆಯ 200 ಜನರ ವಿಷಯ ಮಾತ್ರ ತಿಳಿದಿದೆ. ಇವರಲ್ಲಿ ಗಂಡಿನ ಬುಲ್ಲ, ಗರ್ಭಕೋಶ, ಯೋನಿ, ಅಂಡಾಶಯ ಎಲ್ಲ ಒಟ್ಟಿಗೇ ಇರುತ್ತವೆ. ಆದರೆ ಯಾವುದೂ ಪೂರ್ತಿ ಸರಿಯಾಗಿರದು. ಇದರಿಂದಲೇ ನಿಜವಾಗೂ ಪೂರ್ತಿ ಇರ್ಲಿಂಗಿ ಆಗಿರುವವರೇ ಇಲ್ಲವೆನ್ನಬಹುದು. ಗಡ್ಡ, ಮೀಸೆ, ಸ್ತನಗಳಿರಬಹುದು; ಇವು ಕೂಡ ಕೆಲವು ಕಾಲ ಇದ್ದು ಆಮೇಲೆ ಇಲ್ಲವಾಗಬಹುದು.

	ಹುಸಿ (ಸೂಡೊ) ಗಂಡುಗಳು ಗಂಡಲ್ಲದ ಗಂಡುಗಳು. ಇವರಲ್ಲಿ ವರ್ಣತಂತುಗಳಿದ್ದರೂ ಗಂಡಿನ ಲಕ್ಷಣಗಳೇ ಇರುತ್ತವೆ. ಹೆಣ್ಣಿನ ಅಂಡಾಣುವಿನೊಂದಿಗೆ ಕೂಡದ ರೇತು ಕಣಗಳನ್ನು ತರಡುಗಳು ಹುಟ್ಟಿಸುವುದರಿಂದ ಬರಡಾಗಿರುವುವು. ಗಡ್ಡದಲ್ಲಿ ಕೂದಲು ವಿರಳ. ಕೆಲವೇಳೆ ಸ್ತನಗಳೂ ಬೆಳೆದಿರುತ್ತವೆ. ಹುಸಿ ಹೆಣ್ಣುಗಳು ಹೆಣ್ಣಲ್ಲದ ಹೆಣ್ಣುಗಳು. ಗಂಡಲ್ಲಿರುವಂತೆ ವರ್ಣತಂತುಗಳಿದ್ದರೂ ಜನನಾಂಗಗಳೆಲ್ಲ ಹೆಣ್ಣಿನವೇ. ಅಂಡಾಶಯ ಇಲ್ಲವಾದರೂ ಗರ್ಭಕೋಶ, ಯೋನಿ ಇರುತ್ತವೆ. ಈ ಹೆಣ್ಣು ಕುಳ್ಳು, ಸ್ತನಗಳಿಲ್ಲ, ಮುಟ್ಟೂ ಇಲ್ಲ. ಗರ್ಭದಲ್ಲಿ ಇರುವಾಗಲೇ ಅಡ್ರಿನಲ್ ಗ್ರಂಥಿ ಬಲು ಚಟುವಟಿಕೆ ತೋರುವುದರಿಂದ ಗಂಡಿನ ಲಕ್ಷಣಗಳು ಈ ಹೆಣ್ಣಲ್ಲಿ ಕಾಣಬರುತ್ತವೆ.

	ಅಂಗಾಂಗಗಳು ಅರೆಬರೆ ಬೆಳೆದಿರುವಾಗ ಕೂಸು ಗಂಡೊ ಹೆಣ್ಣೋ ಎಂದು ಅನುಮಾನ ಇರುವುದು ಹುಸಿ ಇರ್ಲಿಂಗಿತನ. ಹೊರಗಿನ ಜನನಾಂಗಗಳಲ್ಲಿ ಹೆಣ್ಣು ಗಂಡು ಎರಡರ ಲಕ್ಷಣಗಳು ಇದ್ದರೂ ಒಳಗಡೆ ಅಂಡಾಶಯ ಇಲ್ಲವೇ ತರಡು ಒಂದು ಮಾತ್ರ ಇರಬಹುದು. ಇದಕ್ಕೆ ಮುಖ್ಯ ಕಾರಣ ಒಳಸುರಿಕ ರಸಗಳೇ. ಕೆಲವೇಳೆ ಕೆಲವರ ಮೈಯ ಕೆಲವು ಅಂಗಗಳೋ ಎಷ್ಟೋ ವೇಳೆ ಇಡೀ ಒಂದು ಪಕ್ಕವೋ ಗಂಡಿನವಂತಿದ್ದು ಉಳಿದ ಭಾಗಗಳು ಹೆಣ್ಣಿನವಂತಿರಬಹುದು. ಈ ತೆರನವರು ಹೆಂಗಂಡು ರೂಪಿಗಳು. ಎಷ್ಟೋ ವೇಳೆ ಬಟ್ಟೆ ಬರೆ, ವಿದ್ಯಾಭ್ಯಾಸ, ನಡೆವಳಿಕೆಗಳ ವಿಚಾರಗಳಲ್ಲಿ ಹುಸಿ ಇರ್ಲಿಂಗಿ ಮಗುವನ್ನು ಗಂಡೋ ಹೆಣ್ಣೋ ಜೀವಕಣಗಳಲ್ಲಿ ಮಾತ್ರ ಇರುವ ದಟ್ಟರಂಗಿ ಚುಕ್ಕೆಯಿಂದ ನಿಜವಾದ ಹುಟ್ಟು ಲಿಂಗವನ್ನು ಗುರುತಿಸಬಹುದು. ಬಹುರೂಪಕಬೀಜ (ಪಾಲಿಮಾರ್ಫೊ ನ್ಯೂಕ್ಲಿಯಾರ್) ಬಿಳಿ ರಕ್ತಕಣಗಳು. ಕೆನ್ನೆಯ ಒಳವರಿಯ ಮೇಲ್ಪೊರಯ ಜೀವಕಣಗಳಲ್ಲೂ ಮುಖ್ಯವಾಗಿ ಚರ್ಮದ ಮೇಲ್ಪೊರೆಯ ಮುಳ್ಳಿರುವ ಜೀವಕಣಗಳಲ್ಲೂ ಈ ಚುಕ್ಕೆಗಳನ್ನು ಸೂಕ್ಷ್ಮದರ್ಶಕದಲ್ಲಿ ಗುರುತಿಸಬಹುದು. ಕೂಸಿನ ಲಿಂಗದ ನಿರ್ಧಾರಕ ವ್ಯತ್ಯಾಸಗಳು ಗರ್ಭದಲ್ಲಿ ಇದ್ದಾಗಲೇ ಕಾಣಬಹುದು. ಇಲ್ಲವೇ ಮಗು ಹುಟ್ಟಿದ ಮೇಲೆ ಬೆಳೆವಾಗ ಕಂಡುಬರಬಹುದು.

	ಗಂಡು ಹುಸಿ ಇರ್ಲಿಂಗಿಗಳಲ್ಲಿ ಘಿಙ ವರ್ಣತಂತುಗಳಿರುತ್ತವೆ. ತರಡುಗಳಿದ್ದರೂ ಗಡ್ಡ, ಮೀಸೆ, ಮತ್ತಿತರ ಗಂಡಿನ ಲಕ್ಷಣಗಳು ಹೊರಗಾಣವು. ಈ ಸ್ಥಿತಿಯ ತೀರ ಕೆಳಮಟ್ಟದವರಲ್ಲಿ ಹೆಣ್ಣಿನ ಅಂಡಾಶಯಗಳಿದ್ದು ಹೆಣ್ಣಂತಿರುವರು. ಮೇಲುಮಟ್ಟದವರು ಗಂಡಿನಂತೆ ಕಂಡರೂ ಬುಲ್ಲದಲ್ಲಿ ಮೂತ್ರನಾಳ ಇರದು. ಅಲ್ಲದೇ ತರಡುಗಳು ಬೀಜಚೀಲದಲ್ಲಿ (ಸ್ಕ್ರೋಟಂ) ಇರದೆ ಹೊಟ್ಟೆಯಲ್ಲೊ ಹೊಟ್ಟೆಗೋಡೆಯಲ್ಲೊ ಒಳಗೊ ಉಳಿದಿರಬಹುದು. ಹೆಣ್ಣು ಹುಸಿ ಇರ್ಲಿಂಗಿಗಳಲ್ಲಿ ಘಿಘಿ ಬಣ್ಣದಂಡಗಳೂ ಹೆಣ್ಣಿನ ಅಂಡಾಶಯಗಳೂ ಇರುತ್ತವೆ. ಮೊದಲು ಹೆಣ್ಣಂತೆ ಕಂಡರೂ ಗರ್ಭದಲ್ಲೊ ಹೊರಗೊ ಕೂಸು ಬೆಳೆವಾಗ ಅಂಡಾಶಯದ ಇಲ್ಲವೇ ಆಡ್ರಿನಲ್ ಗ್ರಂಥಿಗಳ ಬಲು; ಹದಗೆಟ್ಟ ಚಟುವಟಿಕೆಯಿಂದ ಗಂಡಿನ ಲಕ್ಷಣಗಳು ಕಾಣಿಸಿಕೊಳ್ಳುವುವು. ಹೆಂಬುಲ್ಲ ದೊಡ್ಡದಾಗಿ ಕಾಣುವುದರಿಂದ ಕೂಸನ್ನು ಗಂಡೆಂದು ಭಾವಿಸುವರು. ಬೆಳೆದ ಹೆಣ್ಣಿನಲ್ಲಿ ಈ ಬದಲಾವಣೆ ಆದರೆ, ಗಡ್ಡ, ಮೀಸೆಗಳು ಬೆಳೆದು ಗಂಟಲು ದನಿ ಒಡೆಯುತ್ತದೆ. ಹೀಗೆ, ವರ್ಣತಂತುಗಳ ಜನಿಕದ (ಜಿನೆಟಿಕ್) ಲಿಂಗ, ಹೊರಗೆ ತೋರಿ ಕೂಸನ್ನು ಪಾಲಿಸಿದ ಲಿಂಗ (ನರ್ಸರಿ ಸೆಕ್ಸ್), ಕಾನೂನಿನ ಲಿಂಗ (ಲೀಗಲ್ ಸೆಕ್ಸ್). ಇತ್ಯಾದಿ ವಿವರಗಳು ಮದುವೆ ಒಡೆವುದರ ಮೊಕದ್ದಮೆಗಳಲ್ಲಿ ನ್ಯಾಯಾಲಯದ ಚರ್ಚೆಗೆ ಬರುವುವು.

(ಎಂ.ಡಿ.; ಕೆ.ಕೆ.ಎಸ್.ಡಬ್ಲ್ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ